ಈಜಿಪ್ಟಿನ ಪ್ರಾಚೀನ ಧರ್ಮ
 	
ದೇವಾಲಯಗಳ ಭಿತ್ತಿಚಿತ್ರ, ಪ್ರತಿಮಾ ಶಿಲ್ಪಗಳಲ್ಲಿ, ಮತೀಯ ಸಂಸ್ಕಾರಗಳಲ್ಲಿ ಬಳಸುವ ಉಪಕರಣಗಳ ಮೇಲೆ ರೂಪಿತವಾಗಿರುವ ಮತ್ತು ಸಾಹಿತ್ಯದಲ್ಲಿ ಕಾಣಬರುವ ಈಜಿಪ್ಟಿನ ಬಹುಸಂಖ್ಯಾತ ದೇವಗಣ, ಆ ಜನರ ಧಾರ್ಮಿಕ ಆಚಾರ ವ್ಯವಹಾರಗಳ ವೈವಿಧ್ಯ-ಇವು ದಿಗ್ಭ್ರಮೆ ಹಿಡಿಸುವಷ್ಟು ವಿಪುಲವೂ ಸಂಕೀರ್ಣವೂ ಆಗಿವೆ. ಆದರೆ ಈ ನಾಗರಿಕತೆ ಪ್ರಾಗೈತಿಹಾಸಿಕ ಕಾಲದ ನಂಬಿಕೆಗಳಿಂದ ಕ್ರಮೇಣ ಬೆಳೆದು ಬಂದು ಮೂರು ಸಹಸ್ರ ವರ್ಷಗಳ ಜೀವಮಾನದಲ್ಲಿ ವಿವಿಧ ಮೂಲಗಳಿಂದ ವಿವಿಧ ರೀತಿಯ ಪ್ರಭಾವಗಳಿಗೊಳಗಾಗಿತ್ತೆಂಬುದನ್ನೂ ಅದು ನಾಶವಾದ ಸಹಸ್ರಾರು ವರ್ಷಗಳ ಅನಂತರದ ನಾವು ಆಧುನಿಕ ಸಂಸ್ಕøತಿಯಿಂದ ಪ್ರಭಾವಿತವಾಗಿರುವೆವೆಂಬುದನ್ನೂ ಸ್ಮರಿಸಿಕೊಂಡರೆ ಈ ದಿಗ್ಭ್ರಮೆಗೆ ಕಾರಣವಿಲ್ಲ. ಧಾರ್ಮಿಕವಾಗಿ ವಿಶಾಲದೃಷ್ಟಿ ಹೊಂದಿದ್ದ ಈ ಜನ ವಿವಿಧ ಪಂಗಡ. ಪ್ರದೇಶ, ಮೂಲಗಳಿಂದ ಜನ್ಮತಳೆದು ಬಂದ ಪ್ರಾಣಿ, ಮಾನವ ಅಥವಾ ಮಿಶ್ರರೂಪಗಳ-ಕೆಲವು ಸಲ ಪರಸ್ಪರ ವಿರೋಧಾತ್ಮಕವಾದ-ಹಲವಾರು ದೇವತೆಗಳನ್ನುಳಿಸಿಕೊಂಡು ಬಂದಿರುವುದು ಅವರ ವಿಶಾಲದೃಷ್ಟಿಯಿಂದ ಸಾಕ್ಷಿಯಾಗಿದೆ. ಈ ವಿಶಾಲದೃಷ್ಟಿಯ ಪ್ರಭಾವದಿಂದ ಹಳತು-ಹೊಸತುಗಳನ್ನು ಒಂದುಗೂಡಿಸಿ ಹಲವಾರು ವಿರೋಧಾತ್ಮಕ ನಂಬಿಕೆಗಳನ್ನು ಬೆಳೆಸಿಕೊಂಡಿದ್ದರು. ಕಾಲಕ್ರಮದಲ್ಲಿ ಯುದ್ಧಗಳಲ್ಲಿ ಗೆದ್ದು ಅಧಿಕಾರ ಪಡೆದ ಪಂಗಡಗಳ ದೇವತೆಗಳು ಹೆಚ್ಚು ಪ್ರಾಮುಖ್ಯ ಪಡೆದರು. ಥೀಬ್ಸ್ ನಗರದ ಅಮನ್ ದೇವತೆ ಅಲ್ಲಿನ ರಾಜವಂಶದವರು ಈಜಿಪ್ಟಿನ ಚಕ್ರವರ್ತಿಗಳಾದ ಅನಂತರ ಆ ಮೊದಲು ಅಧಿದೇವತೆಯಾಗಿದ್ದ ರಾದೊಂದಿಗೆ ಮಿಳಿತವಾಗಿ ಆಮನ್-ರಾ ಎಂಬ ಹೆಸರಿನಿಂದ ಪ್ರಬಲನಾದ. ಈ ಜನರ ಭಾವನೆಗಳಲ್ಲಿ ಹೆಚ್ಚಿನ ಭಿನ್ನತೆಗಳಿದ್ದರೂ ಮತೀಯಾಚರಣೆಗಳಲ್ಲಿ ಐಕ್ಯ ಕಂಡುಬರುತ್ತಿತ್ತು. ಮಂದಿರಗಳ ಕಟ್ಟಡಗಳು, ಮತೀಯ ಸಂಸ್ಕಾರ ಮತ್ತು ತತ್ತ್ವಗಳಲ್ಲಿ ಈ ಐಕ್ಯವನ್ನು ಕಾಣಬಹುದು. ಮತೀಯ ನಂಬಿಕೆಗಳಲ್ಲಿ ಜಡತೆಯಿರದೆ, ಅನುಕ್ರಮಣ ಶೀಲತೆಯಿದ್ದುದು ಕಾಣಬರುತ್ತದೆ.

	ಈ ಜನರ ಧಾರ್ಮಿಕ ಇತಿಹಾಸವನ್ನು ಸುಲಭವಾಗಿ ಗ್ರಹಿಸಲು ಅವರ ದೇವತೆಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬೇಕಾಗುತ್ತದೆ: (ಅ) ಸ್ಥಳೀಯ ಪ್ರಾಣಿರೂಪ ದೇವತೆಗಳು (ಆ) ಓಸಿರಿಸ್ ಮತ್ತು ಪರಿವಾರ (ಇ) ದೇವಾಲಯಗಳಿಲ್ಲದ ರಾಜವಂಶದ ದೇವತೆಗಳು ಮತ್ತು (ಈ) ಸೂರ್ಯ ಮತ್ತು ಇತರ ನಕ್ಷತ್ರಮೂಲ ದೇವತೆಗಳು ಮತ್ತು (ಈ) ಸೂರ್ಯ ಮತ್ತು ಇತರ ನಕ್ಷತ್ರಮೂಲ ದೇವತೆಗಳು.

	ಆದಿಕಾಲದಲ್ಲಿ ಈಜಿಪ್ಟಿನ ಜನರು ಹಲವಾರು ಪ್ರಾದೇಶಿಕ ಪಂಗಡಗಳಿಗೆ ಸೇರಿದ್ದು ಪ್ರತಿಪಂಗಡದವರೂ ತಮ್ಮದೇ ಆದ ಪ್ರಾಣಿಗಳನ್ನು ಪೂಜಿಸುತ್ತಿದ್ದರು. ಜನೋಪಯೋಗಿ ಸಾಧುಪ್ರಾಣಿಗಳಾದ ಹಸು, ಆಡು, ಕುರಿಗಳೂ ದುಷ್ಟ ಪ್ರಾಣಿಗಳಾದ ನೀರಾನೆ (ಹಿಪ್ಪೊಪೊಟಾಮಸ್). ಮೊಸಳೆ, ನಿಕೃಷ್ಟ ಪ್ರಾಣಿಗಳಾದ ಹಾವು, ಚೇಳು, ಬೆಕ್ಕು ಮುಂತಾದ ಕ್ರೀಮಿಕೀಟಗಳು ದೇವತ್ವ ಪಡೆದು ಪೂಜಿಲ್ಪಡುತ್ತಿದ್ದುವು. ಈ ಪ್ರಾಣಿಗಳ ಕಾಲ್ಪನಿಕವಾದ ಶಕ್ತಿ, ಪ್ರಭಾವ, ಹುಟ್ಟು, ಬೆಳೆವಣಿಗೆ, ಮರಣಗಳನ್ನು ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಧಾರ್ಮಿಕ ನಾಟಕಗಳಾಗಿ ನಿರೂಪಿಸುತ್ತಿದ್ದರು. ಪ್ರತಿಪಂಗಡದ ಮುಖ್ಯ ನಗರಗಳಲ್ಲಿ ಈ ಪ್ರಾಣಿಗಳ ದೇವಾಲಯ, ಕೋಟೆ, ಪರಿವಾರಗಳು ಇರುತ್ತಿದ್ದುವು. ಈ ದೇವತೆಗಳು ಭಕ್ತಾದಿಗಳ ಪೂಜೆಯ ಪ್ರತಿಫಲವಾಗಿ ಅವರ ಭೂಸಂಪತ್ತನ್ನೂ ದನಕುರಿಗಳನ್ನೂ ರಕ್ಷಿಸುತ್ತಿದ್ದುದಲ್ಲದೆ, ಅವರ ಶತ್ರುಗಳ ಮತ್ತು ಪಾಷಂಡಿಗಳ ವಿಷಯದಲ್ಲಿ ಕ್ರೂರವಾಗಿ ನಡೆದುಕೊಳುತ್ತಿದ್ದರೆಂದು ನಂಬಲಾಗಿತ್ತು. ಈ ದೇವತೆಗಳ ವ್ಯಾಪ್ತಿ ತಮ್ಮ ತಮ್ಮ ನಗರ-ಪ್ರದೇಶಗಳಿಗೆ ಸೀಮಿತವಾಗಿರುತ್ತಿತ್ತು. ಕಾಲಾನುಕ್ರಮದಲ್ಲಿ ದೇಶ ಒಬ್ಬ ರಾಜನ ನೇತೃತ್ವದಲ್ಲಿ ಐಕ್ಯ ಸಾಧಿಸಿದ ಅನಂತರ, ದೇವತೆಗಳನ್ನು ಗಣಗಳನ್ನಾಗಿ ವಿಂಗಡಿಸಿ ಅಧಿದೇವತೆ ಅಧೀನದೇವತೆಗಳೆಂದು ವರ್ಗೀಕರಣ ಮಾಡುವ ಪ್ರಯತ್ನದೊಡನೆ ಆಕಾರವನ್ನು ಪ್ರಾಣಿರೂಪದಿಂದ ಮಾನವರೂಪಕ್ಕೆ ಬದಲಿಸುವ ಯತ್ನವೂ ಕಂಡುಬರುತ್ತದೆ. ಪ್ರಾಣಿಯ ತಲೆಯುಳ್ಳ ಮಾನವಾಕೃತಿ ಅಥವಾ ಮಾನವ ದೇಹದ ಮೇಲೆ ಪ್ರಾಣಿಯ ಸಂಕೇತವಿದ್ದ ಆಕೃತಿಗಳನ್ನು ಕಾಣಬಹುದು. ಬಹುಶಃ ಈ ಘಟ್ಟದಲ್ಲೇ ಪೂರ್ಣ ಮಾನವಾಕೃತಿಯ ಕಾಪ್ಟಾಸಿನ ಮಿನ್, ಥೀಬ್ಸ್‍ನ ಆಮನ್, ಓಸಿರಿಸ್, ಇಸಿಸ್, ಹೋರಸ್ ಮುಂತಾದ ದೇವತೆಗಳೂ ಹುಟ್ಟಿಕೊಂಡಂತೆ ಕಾಣುತ್ತದೆ.

	ವಿಶ್ವಸೃಷ್ಟಿ ಮತ್ತು ವಿಶ್ವದೇವತೆಗಳ ವಿಷಯದಲ್ಲಿ ಇವರ ನಂಬಿಕೆ. ಆಚರಣೆಗಳು ಗಮನಾರ್ಹವಾಗಿವೆ. ಭೂಮಿ ತಟ್ಟೆಯಾಕಾರದಲ್ಲಿದ್ದು ಫಲವತ್ತಾದ ಕಣಿವೆ, ಕಂದರ ಗಿರಿದುರ್ಗಗಳಿಂದ ಕೂಡಿದೆಯೆಂದೂ ಜಲರಾಶಿಯ ಮೇಲೆ ತೇಲುತ್ತಿದೆಯೆಂದೂ ಈ ಜನರಾಶಿಯೇ ಆದಿಕಾಲದ ಜೀವರಾಶಿಯ ಸೃಷ್ಟಿಗೆ ಕಾರಣವೆಂದೂ ಇದರಿಂದ ಹುಟ್ಟಿದ ಪರ್ವತದಲ್ಲಿ ದಿನಂಪ್ರತಿ ಸೂರ್ಯ ಉದಯಿಸುವನೆಂದೂ ಈಜಿಪ್ಟಿನ ಸಂಪನ್ಮೂಲವಾದ ನೈಲ್‍ನದಿ ಭೂಮಿಯ ತಳದಿಂದ ಪೊಟರೆಗಳ ಮಾರ್ಗವಾಗಿ ನುಗ್ಗಿಬಂದು ಭೂಮಿಯ ಫಲವತ್ತನ್ನು ಹೆಚ್ಚಿಸುವುದೆಂದೂ ಮೇಲಿನ ಅಂತರಿಕ್ಷ ಬೋಗುಣಿಯಾಕಾರದ ಆಕಾಶವನ್ನು ಎತ್ತಿ ಹಿಡಿದಿರುವುದೆಂದೂ ಈ ಜನ ನಂಬಿದ್ದರು. ವಿಶ್ವದ ಅಂಗಾಂಗಗಳಿಗೂ ಅದಿದೇವತೆಗಳು ಇರುತ್ತಿದ್ದರು. ಭೂದೇವತೆ ಗೆಬ್ ಮಲಗಿರುತ್ತಿದ್ದರೆ ಆಕಾಶದೇವತೆ ನಟ್ ದೇಹವನ್ನು ಕಮಾನಿನಾಕಾರದಲ್ಲಿ ಬಗ್ಗಿಸಿ, ಭೂಮಿಯ ಮೇಲೆ ತನ್ನ ನಾಲ್ಕು ಪಾದಗಳನ್ನೂರಿ ನಿಂತಿರುತ್ತಿದ್ದಳು. ಅಂತರಿಕ್ಷ ದೇವತೆ ಷು ಭೂಮಿಯ ಮೇಲೆ ನಿಂತು ತನ್ನ ಕೈಗಳಿಂದ ಆಕಾಶ ಬೀಳದಂತೆ ಎತ್ತಿ ಹಿಡಿದಿದ್ದ.
 
ನಕ್ಷತ್ರರೂಪದ ದೇವತೆಗಳಲ್ಲಿ ರಾ ಎಂದು ಹೆಸರಾದ ಸೂರ್ಯ ಮುಖ್ಯ. ಆತ ಸಂಧ್ಯೆಯ ಅನಂತರ ದೋಣಿಯಲ್ಲಿ ಕುಳಿತು ಅಧೋಲೋಕಕ್ಕೆ ಹೋಗುವಾಗ ತಾತ್ ಎಂದು ಹೆಸರಾದ ಚಂದ್ರನನ್ನು ಆಕಾಶದಲ್ಲಿ ತನ್ನ ಪ್ರತಿನಿಧಿಯಾಗಿ ನೇಮಿಸುತ್ತಿದ್ದ. ಈ ಪ್ರಯಾಣ ಕಾಲದಲ್ಲಿ ದುಷ್ಟಸರ್ಪವೊಂದು ದೋಣಿಯನ್ನುರುಳಿಸಿ ಮುಳುಗಿಸಲು ಕಾದಿರುತ್ತಿದ್ದುದರಿಂದ ದೀರ್ಘ ಹೋರಾಟದಲ್ಲಿ ಜಯ ಪಡೆದ ಅನಂತರ ಸೂರ್ಯ ಪ್ರಯಾಣ ಮುಂದುವರೆಸಬೇಕಾಗಿತ್ತು.
18ನೆಯ ಚಕ್ರಾಧಿಪತ್ಯದ ಕಾಲದಲ್ಲಿ ದೇವತೆಗಳ ವರ್ಗೀಕರಣ ಕಾರ್ಯ ಭರದಿಂದ ನಡೆದು ಹಲವು ಸ್ತ್ರೀ-ಪುರುಷ ದೇವತೆಗಳನ್ನು ಪತಿ-ಪತ್ನಿಯರನ್ನಾಗಿಯೂ ಮತ್ತೆ ಹಲವರನ್ನು ಅವರ ಮಕ್ಕಳನ್ನಾಗಿಯೂ ವಿಂಗಡಿಸಲಾಯಿತು. ಇಂಥ ವಿಚಾರ ಶೀಲತೆಯ ಕಾರ್ಯದಲ್ಲಿ ಈಜಿಪ್ಟಿನ ಜನ ಉನ್ನತ ಮಟ್ಟದ ಪ್ರತಿಭೆ ತೋರಿ, ಗೌಣರಾದ ಹೊಸ ದೇವತೆಗಳನ್ನು ಸೃಷ್ಟಿಸಿದ್ದಾರೆ. ಉದಾ: ಸತ್ಯದ ಗೌಣರೂಪನಾದ ಮಾತ್ ದೇವತೆ. 

	ಇವೆಲ್ಲವೂ ಉನ್ನತ ತಾತ್ತ್ವಿಕ ಮಟ್ಟದವರ ಧರ್ಮಕ್ಕೆ ಸಂಬಂಧಿಸಿದುದಾದರೆ ಜನ ಸಾಮಾನ್ಯರ ಧರ್ಮಗಳ ವಿಷಯಗಳನ್ನು ಕೆಳವರ್ಗದ ಭೂತಗಣ ಮತ್ತು ಉಪ ದೇವತೆಗಳ ವರ್ಣನೆಯಿಂದ ತಿಳಿಯಬಹುದು. ನೀರಾನೆಯ ದೇಹ, ಮೊಸಳೆಯ ತಲೆ, ಮಾನವನ ಕೈಗಳು ಮತ್ತು ಸಿಂಹದ ಪಾದಗಳುಳ್ಳ ಟ್ಯೂರಿಸ್ ಗರ್ಭಿಣಿ ಸ್ತ್ರೀಯರ ರಕ್ಷಣೆಯನ್ನೂ ದುಷ್ಟಶಕ್ತಿಗಳ ನಿಗ್ರಹವನ್ನೂ ಮಾಡಿದರೆ, ದೀರ್ಘವಾದ ದಾಡಿ, ಚಿರತೆಯ ಡೊಂಕುಬಾಲಗಳ, ಗಿಡ್ಡನಾದ ಬೆಸ್ ಪ್ರಸವ ಸಮಯದಲ್ಲಿ ಸ್ತ್ರೀಯರನ್ನು ರಕ್ಷಿಸುತ್ತಿದ್ದು ನೃತ್ಯ ಸಂಗೀತಗಳ ಅಧಿದೇವತೆಯಾಗಿದ್ದ. ಈ ವರ್ಗದಲ್ಲಿ ಮಂತ್ರಮಾಟಗಳು ಹೆಚ್ಚು ಬಳಕೆಯಲ್ಲಿದ್ದು ದುಷ್ಟಶಕ್ತಿಗಳ ನಿಗ್ರಹಕ್ಕೆ ಉಪಯುಕ್ತವಾಗಿದ್ದುವು. ಸಮಾಧಿನಾಶಕರ ವಿರುದ್ಧ ಶಾಪಗಳು, ಶತ್ರುರಾಜ ಶ್ರೀಮಂತ ಗೊಂಬೆಗಳ ಮೇಲೆ ಮಾಟ ಮಾಡಿ ಅವರನ್ನು ನಾಶಗೊಳಿಸಲು ಉಪಯೋಗಿಸಲ್ಪಡುತ್ತಿದ್ದ ಯಂತ್ರಗಳು ಬಳಕೆಯಲ್ಲಿದ್ದುವು.
ಇವರ ಮತೀಯ ಭಾವನೆಗಳಲ್ಲಿ ದುಃಖಪರ ನಂಬಿಕೆಗಳಿಗೆ ಪ್ರಾಶಸ್ತ್ಯವಿಲ್ಲದೆ ಆಶಾವಾದವೇ ಎದ್ದು ಕಾಣುತ್ತದೆ. ಹಲವು ಹಾಸ್ಯಾಸ್ಪದವಾದ ನಂಬಿಕೆಗಳೂ ಇದ್ದುವು. ಮೈಗಳ್ಳ ಶ್ರೀಮಂತರು ದೈಹಿಕ ಶ್ರಮದ ಕೆಲಸ ಮಾಡಲು ಈ ಲೋಕದಲ್ಲಿ ಮಾಡಿಕೊಂಡಿದ್ದ ವ್ಯವಸ್ಥೆಯ ಮಾದರಿಯಲ್ಲಿ ಮರಣಾನಂತರ ಪರಲೋಕದಲ್ಲೂ ತಮ್ಮ ಪಾಲಿನ ಕೆಲಸ ಮಾಡಲು ಸೇವಕರ ಗೊಂಬೆಗಳನ್ನು ಮಾಡಿಸಿ ಸಮಾಧಿಗಳಲ್ಲಿ ನಿಕ್ಷೇಪಿಸುತ್ತಿದ್ದುದು ಹಾಸ್ಯಾಸ್ಪದವಾಗಿದೆ.

	ದೇವಾಲಯ ಮತೀಯ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಮತೀಯ ಆಚರಣೆಗಳು ಸಂಘಟಿಸಲ್ಪಟ್ಟಿದ್ದು ದಕ್ಷ ಪುರೋಹಿತ ವರ್ಗ ಅವನ್ನು ನಡೆಸುತ್ತಿದ್ದರು. ಹಲವಿಧವಾದ ಸಾಮಾಜಿಕ ಸಾಂಸ್ಕøತಿಕ ಚಟುವಟಿಕೆಗಳು ಅಲ್ಲಿ ನಡೆಯುತ್ತಿದ್ದವು. ದೇವಾಲಯದ ಆಡಳಿತ ರಾಜರ ಅಧಿಕಾರಕ್ಕೊಳಗಾಗದೇ ಮುಖ್ಯ ಪುರೋಹಿತನ ಮೇಲ್ವಿಚಾರಣೆಗೊಳಪಟ್ಟಿತ್ತು. ದೇವದಾಸಿ ಪದ್ಧತಿ ರೂಢಿಯಲ್ಲಿತ್ತು.

	ನಿತ್ಯಪೂಜಾಕ್ರಮದಂತೆ ಅರ್ಚಕ ಶುಚಿರ್ಭೂತನಾಗಿ ಮಂದಿರದ ಬಾಗಿಲುಗಳನ್ನು ತೆರೆದು ಧೂಪದೀಪಾದಿಗಳಿಂದ ಅರ್ಚಿಸಿ, ಅಭಿಷೇಕ ಮಾಡಿ, ಚಂದನಾದಿಗಳನ್ನು ನೈವೇದ್ಯವನ್ನು ಅರ್ಪಿಸಿ ಪ್ರಾರ್ಥಿಸುತ್ತಿದ್ದ. ಅನಂತರ ಗುಡಿಯ ಬಾಗಿಲುಗಳನ್ನು ಮುಚ್ಚಿ ಹಿಂತಿರುಗುತ್ತಿದ್ದ. ವಿಶೇಷ ಸಂದರ್ಭಗಳಲ್ಲೂ ವಾರ್ಷಿಕೋತ್ಸವಗಳಲ್ಲೂ ಅಥವಾ ವ್ಯವಸಾಯಕ್ಕೆ ಸಂಬಂಧಿಸಿದ ಉತ್ಸವಗಳು ಬೇರೆ ಬೇರೆ ಕೇಂದ್ರಗಳಲ್ಲಿ ನಡೆಯುತ್ತಿದ್ದು ಆ ಸಂದರ್ಭಗಳಲ್ಲಿ ದೇವರ ಪ್ರತಿಮೆಯನ್ನು ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ ಮಾಡುತ್ತಿದ್ದರು. ವಿವಿಧ ಭಾಗಗಳಿಂದ ಬಂದ ಜನ ಅಪರಿಮಿತ ಉತ್ಸಾಹದಿಂದ ಭಾಗವಹಿಸಿ ಪೌರಾಣಿಕ ನಾಟಕಗಳನ್ನು ಅಭಿನಯಿಸುತ್ತಿದ್ದರು.

	ಇವರ ಮತೀಯ ನಂಬಿಕೆಗಳಲ್ಲಿ ಸಮಾಧಿಗಳಿಗೆ ಮುಖ್ಯಸ್ಥಾನವಿತ್ತು. ಪಿರಮಿಡ್ಡು ಮತ್ತು ಸಂಬಂಧಪಟ್ಟ ದೇವಾಲಯಗಳ ಶೋಧನೆಗಳಲ್ಲಿ ಬಹಳಷ್ಟು ಅವಶೇಷಗಳು ದೊರಕಿ ಈ ನಾಗರಿಕತೆಯ ರೂಪರೇಷೆಗಳನ್ನು ವಿಶದವಾಗಿ ತಿಳಿಸಿವೆ. ಈ ಜನರ ಭಾವನೆಯಲ್ಲಿ ಮರಣಾನಂತರದ ಪರಲೋಕಜೀವನ ಪ್ರಮುಖವಾಗಿದ್ದು ಅವರ ಪ್ರತಿಕಾರ್ಯದಲ್ಲೂ ಅದು ಅಗ್ರಸ್ಥಾನ ಪಡೆದಿತ್ತು. ಮರಣಾನಂತರ ಪರಲೋಕದ ದೊರೆ ಓಸಿರಿಸ್‍ನ ಮುಂದೆ ವಿಚಾರಣೆಗೊಳಪಟ್ಟು ಪ್ರತಿವ್ಯಕ್ತಿಯೂ ತನ್ನ ಕರ್ಮಕ್ಕನುಗುಣವಾದ ಫಲವನ್ನನುಭವಿಸಬೇಕಾಗಿತ್ತು. ಈ ಜನ ಶರೀರ ಮತ್ತು ಆತ್ಮಗಳ ನಡುವಣ ಭೇದವನ್ನು ಗುರ್ತಿಸಿ, ಮರಣಾನಂತರ, ಆತ್ಮನನ್ನು ಆತ್ಮ, ಚೈತನ್ಯ, ನಾಮ, ಛಾಯೆ ಮತ್ತು ಕ ಎಂಬುದಾಗಿ ವಿಂಗಡಿಸುತ್ತಿದ್ದರು. ಆತ್ಮ ಬೇಕಾದಾಗ ಶರೀರಕ್ಕೆ ಹಿಂತಿರುಗುವನೆಂದೂ ಆದ್ದರಿಂದ ಮೃತನ ಶರೀರವನ್ನು ರಕ್ಷಿಸಿಡಬೇಕೆಂದೂ ನಂಬಿದ್ದರು. ಈ ನಂಬಿಕೆಯ ದೆಶೆಯಿಂದ ಈ ಸಂಸ್ಕøತಿಯ ಮುಖ್ಯ ಲಕ್ಷಣಗಳಲ್ಲೊಂದಾದ ಮೃತದೇಹವನ್ನು ರಕ್ಷಿಸಿಡುವ ಮಮಿ ಪದ್ಧತಿ ಹುಟ್ಟಿಕೊಂಡಿತು. ಇವರ ಸಮಾಧಿಗಳಲ್ಲಿ ಪರಲೋಕ ಜೀವನಕ್ಕೆ ಅವಶ್ಯಕವಾದ ಹಲವು ರೀತಿಯ ವಸ್ತುಗಳನ್ನು ನಿಕ್ಷೇಪಿಸುತ್ತಿದ್ದರು. ಮೃತರ ವಿಷಯದಲ್ಲಿ ಭೀತಿಯಿದ್ದದು ಶ್ರೀಮಂತನೊಬ್ಬ ತನ್ನ ಮೃತಪತ್ನಿಯಿಂದೊದಗುತ್ತಿದ್ದ ತೊಂದರೆಗಳನ್ನು ವಿವರಿಸಿ ಆಕೆಯ ಆತ್ಮಕ್ಕೆ ಬರೆದ ಪತ್ರವೊಂದರಿಂದ ತಿಳಿದುಬಂದಿದೆ. ಜೀವಂತ ವ್ಯಕ್ತಿಗಳು ಮೃತನ ಆತ್ಮಗಳನ್ನು ತೃಪ್ತಿಪಡಿಸಿ ಅವುಗಳ ಕೃಪೆಯಿಂದ ಲಾಭ ಪಡೆಯಬಹುದಾಗಿತ್ತೆಂದೂ ಈ ಜನ ನಂಬಿದ್ದರು.

	ಒಟ್ಟಿನಲ್ಲಿ ಇಷ್ಟು ಹೇಳಬಹುದು. ಈಜಿಪ್ಟಿನ ಮತಧರ್ಮಗಳ ಬಗ್ಗೆ ವಿಪುಲವಾದ ದಾಖಲೆಗಳು ದೊರೆತಿದ್ದರೂ ಅವುಗಳ ವ್ಯಾಖ್ಯಾನದ ಬಗ್ಗೆ ಅಭಿಪ್ರಾಯ ಭಿನ್ನತೆ ಇರುವುದರಿಂದ ಅದನ್ನು ಹೀಗೆಯೇ ಎಂದು ಹೇಳಲು ಕಷ್ಟವಾಗುತ್ತದೆ. ಅನೇಕ ಕಡೆ ವಿವರಗಳಲ್ಲಿ ಹೆಚ್ಚಿನ ಸಂಕೀರ್ಣತೆ, ಪರಸ್ಪರ ವಿರೋಧ ಕಂಡುಬರುತ್ತವೆ. ದೇವರುಗಳು ಒಂದೇ ಬಗೆಯವರಾದರೂ ಎಲ್ಲರಿಗೂ ಅಲ್ಲಿ ಸ್ಥಾನ ಉಂಟು. ಸೃಷ್ಟಿ ಮತ್ತು ನೈಸರ್ಗಿಕ ಕ್ರಿಯೆಗಳ ಬಗ್ಗೆ ಇರುವ ಐತಿಹ್ಯಗಳು ಪರಸ್ಪರ ವಿರುದ್ಧವಾಗಿವೆ. ದೇವತೆಗಳಿಗೂ ಪ್ರಾಣಿಗಳಿಗೂ ರೂಪ, ಶಕ್ತಿಗಳಲ್ಲಿ ಸಾಮ್ಯವಿರುವುದು, ಬೆರಕೆಯಾಗಿರುವುದು ಕಂಡುಬರುತ್ತದೆ. ಆಕ್ನಾಟನ್ ದೊರೆ ಸೂರ್ಯದೇವನ ಮೂಲಕ ಏಕದೇವತಾಪಂಥವನ್ನು ಸ್ಥಾಪಿಸಲು ಪ್ರಯತ್ನಿಸಿದಂತೆ ಕಾಣುತ್ತದೆ. ಸತ್ತವರ ಬಗ್ಗೆ ಈಜಿಪ್ಟಿನವರು ದೊಡ್ಡದೊಂದು ತತ್ತ್ವವನ್ನೇ ಬೆಳೆಸಿಕೊಂಡಿದ್ದರು. ಪಿರಮಿಡ್ಡುಗಳು, ಧೂಪಲೇಪನಾದಿಗಳಿಂದ ಹೆಣವನ್ನು ಒಪ್ಪವಿಡುತ್ತಿದ್ದುದು ಇದಕ್ಕೊಂದು ನಿದರ್ಶನ. ಆತ್ಮ, ಪುನರ್ಜನ್ಮಗಳಲ್ಲವರಿಗೆ ನಂಬಿಕೆ ಇತ್ತು. ಅಷ್ಟೇ ಅಲ್ಲ. ದೇಹವೂ ಅವಿನಾಶಿ ಎಂದು ಅವರು ನಂಬಿದ್ದರು. ರಾಜನೇ ಪ್ರತ್ಯಕ್ಷ ದೇವತೆ. ದೇವದೂತನಾದ್ದರಿಂದ ಅವನೇ ಅವರ ಪ್ರಧಾನ ಪುರೋಹಿತನಾಗಿದ್ದ. ಪರಿಷ್ಕಾರವಾದ ದೇವತಾರಾಧನೆ, ಕರ್ಮಾದಿಗಳು, ಆಹುತಿ, ದಾನಧರ್ಮಗಳಲ್ಲಿ ಅವರಿಗೆ ನಂಬಿಕೆ ಇತ್ತಾದರೂ ಪರದೇಶಗಳ ಮೇಲೆ ಘೋರವಾಗಿ ಯುದ್ಧ ಮಾಡುತ್ತಿದ್ದರಲ್ಲದೆ ಗುಲಾಮೀ ಪದ್ಧತಿಯನ್ನು ಒಪ್ಪಿದ್ದರು. ಅವರ ಹೋರಸ್, ಇಸಿಸ್, ಓಸಿರಿಸ್ ಮತ್ತು ಸೆರಾಪಿಸ್ ದೇವತೆಗಳು ಗ್ರೀಸ್ ಮತ್ತು ರೋಮ್ ದೇವತಾ ವರ್ಗವನ್ನು ಸೇರಿರುವುದನ್ನು ಗಮನಿಸಿದರೆ ನೆರೆಹೊರೆಯ ಪ್ರಾಂತ್ಯಗಳಾದ ಗ್ರೀಸ್ ಮತ್ತು ರೋಮ್‍ಗಳ ಜನಜೀವನದ ಮೇಲೆ ಈಜಿಪ್ಟಿನ ಧಾರ್ಮಿಕ ಪ್ರಭಾವ ಅಪಾರವಾಗಿತ್ತೆಂದು ಹೇಳಬೇಕು.

(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ